ಕಷ್ಟಗಳು ಹಾಗೂ ಪರೀಕ್ಷೆಗಳ ಸಮಯದಲ್ಲಿ (#9497)

*“ನಿನ್ನ ನಾಮದ ಶಕ್ತಿಯಿಂದ ಸಶಸ್ತ್ರವಾಗಿದ್ದ ಯಾವುದೂ ನನ್ನನ್ನು ಎಂದಿಗೂ ನೋಯಿಸದು, ಹಾಗೂ ನನ್ನ ಹೃದಯದಲ್ಲಿ ನಿನ್ನ ಪ್ರೀತಿಯಿಂದಾಗಿ ಎಲ್ಲಾ ಪ್ರಪಂಚದ ಮುಖಗಳು ಯಾವ ರೀತಿಯಲ್ಲೂ ನನಗೆ ಬೆದರಿಸವು.”  



ಓ ದೇವರೇ, ನನ್ನ ದೇವರೇ, ನಿನ್ನ ಔದಾರ್ಯ ಹಾಗೂ ಕೊಡುಗೈತನದಿಂದ ನನ್ನ ಸಂಕಟವನ್ನು ನಿವಾರಿಸು.  ನನ್ನ ಮನೋವೇದನೆಯನ್ನು ನಿನ್ನ ಪ್ರಭಾವ ಮತ್ತು ಶಕ್ತಿಯಿಂದ ಹೊಡೆದೋಡಿಸು.  ಎಲ್ಲ ಕಡೆಯಿಂದಲು ನನ್ನನ್ನು ಸುತ್ತುಗಟ್ಟಿರುವ ದುಃಖಗಳನ್ನು ಸಹಿಸುತ್ತಾ ನಿನ್ನತ್ತ ನನ್ನ ಮುಖವನ್ನು ಹೊರಳಿಸುವ ವೇಳೆಯಲ್ಲಿ ಓ ದೇವರೇ, ನೀನು ನನಗೆ ಪ್ರಸನ್ನನಾಗು.  ಸಮಸ್ತ ಅಗೋಚರವಾದ ಎಲ್ಲ ವಸ್ತುಗಳ ಮೇಲೂ ನಿನ್ನ ಪ್ರಭಾವವನ್ನು ಹಾಯಿಸಿರುವ ನಿನ್ನಲ್ಲಿ ನನ್ನ ಬೇಡಿಕೆ ಹೀಗೆ: ನಿನ್ನ ಖ್ಯಾತಿಯಿಂದ ಎಲ್ಲ ಮಾನವರ ಹೃದಯ ಮತ್ತು ಆತ್ಮಗಳನ್ನು ನಿಗ್ರಹಿಸಿರುವ ಅಲ್ಲದೆ ನಿನ್ನ ಕರುಣೆಯ ಸಾಗರದ ದೊಡ್ಡ ತೆಗೆಗಳಿಂದ ಆವರಿಸಿರುವ, ಔದಾರ್ಯದ ಮತ್ತು ದಯೆಯೂ ಪ್ರಕಾಶಗೊಳಿಸಿರುವ ನೀನು ನಿನ್ನತ್ತ ಅಡೆತಡೆಗೂ ಜಗ್ಗದೆ ಗಮನವಿಡುವವರ ಸಾಲಿಗೆ ನನ್ನನ್ನು ಸೇರಿಸು.  ಸಕಲ ಕೀರ್ತಿ ಹಾಗೂ ಸೃಷ್ಟಿಕರ್ತನಾದ ಓ ಪರಮಾತ್ಮನೇ ನನ್ನ ಪ್ರಾರ್ಥನೆಯನ್ನು ಲಾಲಿಸು.
ಓ ಪ್ರಭುವೇ, ನಿನ್ನ ದಿನಗಳಲ್ಲಿ ನನ್ನ ಪಾಲಿಗೆ ಬಂದುದ್ದನ್ನು ನೀನು ಕಂಡಿರುವೆ.  ನಿನ್ನ ಕೀರ್ತಿ ಹಾಗೂ ನಿನ್ನ ಸುಗುಣಗಳನ್ನು ಸ್ಮರಿಸುತ್ತಾ ನಿನ್ನ ಸೇವೆಗೈಯಲು ಮತ್ತು ನಿನ್ನ ಸದ್ಗುಣಗಳನ್ನು ಕೊಂಡಾಡುವಂತಹ ಸದಾವಕಾಶಗಳನ್ನು ದಯಾಪಾಲಿಸು ಎಂದು ನಿನ್ನಲ್ಲಿ ಮೊರೆಯಿಡುತ್ತೇನೆ.  ವಾಸ್ತವವಾಗಿ ನೀನು ಸರ್ವಶಕ್ತ,  ಅತ್ಯಂತ ಬಲಶಾಲಿ ಎಲ್ಲ ಮಾನವರ ಪ್ರಾರ್ಥನೆಯನ್ನೂ ಪಡೆವ ಮಹಾನುಭಾವ.  ಕಡೆಯದಾಗಿ ನಾನು ಬಿನ್ನವಿಸುವುದಿಷ್ಟೆ, ನಿನ್ನ ಸ್ವರೂಪದ ಜ್ಯೋತಿಯ ಮುಖೇನ ನನ್ನ ವಿಚಾರಗಳನ್ನು ಆಶೀರ್ವದಿಸು.  ನನ್ನ ಋಣಗಳನ್ನು ಪರಿಹರಿಸು.  ನನ್ನ ಅಗತ್ಯಗಳನ್ನು ಪೂರೈಸು ಯಾರ ಶಕ್ತಿ ಹಾಗೂ ಅಧಿಕಾರವನ್ನು ಪ್ರತಿಯೊಬ್ಬರೂ ಸಾಕ್ಷೀಭೂತ ಮಾಡಿರುವರೋ, ಯಾರ ವೈಭವ ಹಾಗೂ ಪರಮಾಧಿಕಾರವನ್ನು ಯಾವ ಹೃದಯಗಳು ಅಂಗೀಕರಿಸುವುವೋ ಆತನೇ ನೀನು.  ನನ್ನ ಕರೆಗೆ ಓಗೊಟ್ಟು ಉತ್ತರ ನೀಡಲು ಸಿದ್ಧವಿರುವ ನೀನಲ್ಲದೆ ಬೇರೆ ಯಾವ ದೇವರೂ ಇಲ್ಲ.

-Bahá'u'lláh
-----------------------

ಕಷ್ಟಗಳು ಹಾಗೂ ಪರೀಕ್ಷೆಗಳ ಸಮಯದಲ್ಲಿ (#9498)

ಓ ಸ್ವಾಮಿಯೇ, ನಿನ್ನ ಸಾಮೀಪ್ಯವಿರುವವರಿಗೆ ನಿನ್ನ ಪರೀಕ್ಷೆಯೇ ಗುಣಗೊಳಿಸುವ ಔಷದಿಯಿದ್ದಂತೆ.  ನಿನ್ನನ್ನು ಪ್ರೀತಿಸುವವರಿಗೆಲ್ಲ ನಿನ್ನ ಖಡ್ಗವೇ ಉತ್ಸಾಹಪೂರ್ವಕ ಆಕಾಂಕ್ಷೆ ನಿನ್ನನ್ನು ಕುರಿತು ಹಂಬಲಿಸುವವರಿಗೆ ನಿನ್ನ ಈಟಿಯೇ ಪ್ರಿಯವಾದ ಇಚ್ಛೆ.  ನಿನ್ನ ಸತ್ಯವನ್ನು ಗ್ರಹಿಸುವವರಿಗೆ ನಿನ್ನ ನಿರ್ಧಾರವೇ ಅವರ ಆಶೆ.  ನಿನ್ನ ದೈವಿಕ ಮಾಧುರ್ಯ ಹಾಗೂ ನಿನ್ನ ಖ್ಯಾತಿಯ ದಿವ್ಯ ಪ್ರಕಾಶದಿಂದ ನಿನ್ನ ಸಾಮೀಪ್ಯಕ್ಕೆ ಬರಮಾಡಿಕೊಳ್ಳುವಂತೆ ಬೇಡುತ್ತೇನೆ.  ಓ ದೇವರೇ, ನಮ್ಮ ಹೃದಯಗಳನ್ನು ನಿನ್ನ ಜ್ಞಾನ ಸಾಗರದಿಂದ ಜಾಗೃತಗೊಳಿಸು.  ನಿನ್ನ ಕೀರ್ತಿಯ ಪ್ರಕಾಶದಿಂದ ನಮ್ಮ ಎದೆಗಳನ್ನು ಬೆಳಗಿಸು.   -

-Bahá'u'lláh
-----------------------

ಕಷ್ಟಗಳು ಹಾಗೂ ಪರೀಕ್ಷೆಗಳ ಸಮಯದಲ್ಲಿ (#9499)

ಓ ದೇವರೇ, ನನ್ನ ಪ್ರಭುವೇ, ನಾನು ನಿನ್ನನ್ನು ಹೀಗೆ ಬೇಡುವೆ ಕಷ್ಟ ಪರಿಹಾರಕ ಮಹಾಸಾಗರನೇ, ನಿನ್ನ ಘನತೆಯ ದಿವ್ಯ ಜ್ಯೋತಿಯಿಂದ, ನಿನ್ನ ಕೀರ್ತಿಯ ಮೂಲಕ ನಿನ್ನ ಸೇವಕರನ್ನು ನಿಗ್ರಹಿಸಿರುವುದರಿಂದ, ನಿನ್ನ ಉನ್ನತವಾದ ವಚನಗಳಿಂದ, ಶ್ರೇಷ್ಠವಾದ ನಿನ್ನ ಬರಹಗಳಿಂದ  ನಿನ್ನ ಕರುಣೆಗೆ ಪಾತ್ರರಾದ ಸ್ವರ್ಗದಲ್ಲಿ ಹಾಗೂ ಭೂಮಿಯಲ್ಲಿರುವ ಎಲ್ಲರ ಮೇಲಿನ ದಯೆಯಿಂದ ಕೂಡಿದವನಾದ ನೀನು ನನ್ನನ್ನು ಎಲ್ಲ ಕಷ್ಟಗಳಿಂದ, ತೊಂದರೆಗಳಿಂದ ಅಲ್ಲದೆ ಎಲ್ಲ ದುರ್ಬಲತೆಯಿಂದ, ನಿಶಕ್ತಿಯಿಂದ ತೊಲಗಿಸುವವನಾಗು.  ನಿನ್ನ ದಯಾಪೂರಿತವಾದ ಜಲದಿಂದ ಮುಕ್ತಿಗೆ ಕಾರಣನಾಗು.
ಓ ನನ್ನ ಸ್ವಾಮಿಯೇ, ನಿನ್ನ ಉದಾರತೆಯ ದ್ವಾರದಲ್ಲಿ ಕಾಯುತ್ತಿರುವ ಅಲ್ಲದೆ ನಿನ್ನ ದಯೆಯನ್ನೇ ಹಿಡಿದು ಜೋಲಾಡುತ್ತಿರುವ ಹಾಗೂ ನಿನ್ನಲ್ಲಿ ಆಸೆ ಭರವಸೆಯನ್ನು ಹೊಂದಿರುವ ಈ ಕಿಂಕರನನ್ನು ಕಂಡಿರುವೆ.  ನಿನ್ನ ಸಮುದ್ರದಂತಹ ಘನತೆಯನ್ನು ಆಶ್ರಯಿಸಲು ಕಾತುರಪಡುತ್ತಿರುವ ಮತ್ತು ನಿನ್ನ ಕರುಣೆಯನ್ನು ಅಪೇಕ್ಷಿಸುತ್ತಿರುವ ಅವನ ಆಶಯವನ್ನು ನಿರಾಕರಿಸಬೇಡವೆಂದು ನಿನ್ನಲ್ಲಿ ಅನನ್ಯವಾಗಿ ಬೇಡುತ್ತೇನೆ.  ನನ್ನನ್ನು ಸಂತಸಗೊಳಿಸುವಂತೆ ಮಾಡಲು ಶಕ್ತನಾಗಿದ್ದೀಯೇ, ನಿನ್ನಲ್ಲದೆ ಬೇರೆ ಯಾವ ದೇವರೂ ಇಲ್ಲ.  ಸದಾ ಕ್ಷಮಿಸುವ ಹಾಗೂ ಔದಾರ್ಯದ ಹೊಳೆಯನ್ನು ಹರಿಸುವ ಭಗವಂತ ಇನ್ನಾರೂ ಇಲ್ಲ.

-Bahá'u'lláh
-----------------------

ಕಷ್ಟಗಳು ಹಾಗೂ ಪರೀಕ್ಷೆಗಳ ಸಮಯದಲ್ಲಿ (#9500)

ಓ ನನ್ನ ಭಗವಂತನೇ, ನಿನ್ನ ಶಕ್ತಿಯ ಬಲದಿಂದ ನಾನು ಪ್ರಮಾಣಿಸುತ್ತಿದ್ದೇನೆ.  ನನ್ನ ಪರೀಕ್ಷಾ ಸಮಯದಲ್ಲಿ ಯಾವುದೇ ಕೆಡುಕು ನನ್ನನ್ನು ಆಕ್ರಮಿಸದಿರಲಿ ಹಾಗೂ ಅಜಾಗರೂಕತೆಯ ಕ್ಷಣಗಳಲ್ಲಿ ನಿನ್ನ ಪ್ರೇರಣೆಯ ಮೂಲಕ ನನ್ನ ಹೆಜ್ಜೆಗಳಿಗೆ ಸರಿ ದಾರಿಯ ಮಾರ್ಗದರ್ಶನ ನೀಡು.  ನೀನೇ ದೇವರು ನಿನ್ನ ಅಪೇಕ್ಷೆಯಂತೆಯೇ ಮಾಡಲು ನೀನು ಶಕ್ತನಿರುವೆ. ನಿನ್ನ ಸಂಕಲ್ಪವನ್ನು ಯಾರೂ ಎದುರಿಸಲಾರರು ಅಥವಾ ನಿನ್ನ ಉದ್ದೇಶವನ್ನು ಯಾರೂ ನಿಷ್ಫಲಗೊಳಿಸಲಾರರು.

-The Báb
-----------------------

ಕಷ್ಟಗಳು ಹಾಗೂ ಪರೀಕ್ಷೆಗಳ ಸಮಯದಲ್ಲಿ (#9501)

ಓ ಪ್ರಭುವೇ! ಪ್ರತಿಯೊಂದು ಸಂಕಟದ ನಿವಾರಕನೂ, ಮತ್ತು ಪ್ರತಿಯೊಂದು ದುಃಖವನ್ನು ಹೋಗಲಾಡಿಸುವವನೂ ನೀನೇ ಆಗಿರುವೆ.  ಯರು, ಶೋಕವನ್ನು ಹೊರಗಟ್ಟಿ ಪ್ರತಿಯೊಂದು ಸ್ರೆರೆಯಾಳನ್ನು ಮುಕ್ತಗೊಳಿಸುವನೋ, ಪ್ರತಿಯೊಂದು ಆತ್ಮವನ್ನು ಉದ್ದರಿಸುವನೋ ಅವನೇ ನೀನಾಗಿರುವೆ.  ಪ್ರಭುವೇ! ನಿನ್ನ ಕರುಣೆಯ ಮೂಲಕ ವಿಮೋಚನೆಗೊಳಿಸು ಮತ್ತು ಮೋಕ್ಷ ಹೊಂದಿರುವ ಸೇವಕರುಗಳಲ್ಲಿ ನಾನೂ ಒಬ್ಬನಾಗಿರುವಂತೆ ಲೆಕ್ಕಿಸು.

-The Báb
-----------------------

ಕಷ್ಟಗಳು ಹಾಗೂ ಪರೀಕ್ಷೆಗಳ ಸಮಯದಲ್ಲಿ (#9502)

ಓ ನನ್ನ ಪ್ರಭುವೇ, ಜನರು ನೋವು, ಅಪತ್ತುಗಳಿಂದ, ಕಷ್ಟ, ನಿಷ್ಠುರಗಳಿಂಡ ಅವರಿಸಲ್ಪಟ್ಟಿರುವರೆಂದು ನೀನು ಅರಿತಿರುವೆ.  ಮಾನವನ ಒಂದೊಂದು ಕಷ್ಟವೂ ಅವನನ್ನು ಹಿಂಸಿಸುವುದು.  ಅವನ ಒಂದೊಂದು ದುಃಸ್ಥಿತಿಯೂ ಅವನನ್ನು ಸರ್ಪ ಕಚ್ಚಿದಂತೆಯೇ ಸರಿ.  ಇದನ್ನು ಕೂಡ ನೀನು ತಿಳಿದಿರುವಿ.  ನೀನು ನೀಡುವ ಸಂರಕ್ಷಣೆ, ಭದ್ರತೆ, ಕಾಯುವಿಕೆ ಮತ್ತು ಕಾಪಾಡುವಿಕೆ ಇವುಗಳ ಹೊರತಾಗಿ ಅವನಿಗೆ ಬೇರೆ ಯಾವ ರಕ್ಷಣೆ ಹಾಗೂ ಆಶ್ರಯವಿಲ್ಲ.  
ಓ ದಯಾಳು, ಓ ನನ್ನ ಸ್ವಾಮಿಯೇ, ನಿನ್ನ ಸಂರಕ್ಷಣೆಯೇ ನನ್ನ ಅಸ್ತ್ರಶಸ್ತ್ರಗಳ ಬತ್ತಳಿಕೆಯಾಗಿರಲಿ.  ನಿನ್ನ ಜೋಪಾನ ತನವೇ ನನ್ನ ಗುರಾಣಿಯಾಗಿರಲಿ.  ನಿನ್ನ ಏಕೀಭಾವದ ಮೂರ್ತಿಯೇ ಹಾಗೂ ಅದರ ದ್ವಾರದಲ್ಲಿ ಕಾಣಿಸಿಕೊಳ್ಳುವ ನಮ್ರತೆಯೇ ನನಗೆ ಬೆಂಗಾವಲಾಗಿರಲಿ.  ನಿನ್ನ ವಶತ್ವ ಮತ್ತು ರಕ್ಷಣೆ ನನ್ನ ಕೋಟೆ ಹಾಗೂ ನಿವಾಸಸ್ಥಾನವಾಗಿರಲಿ.  ನನ್ನನ್ನು ಅಹಂ ಮತ್ತು ಆಕಾಂಕ್ಷೆಗಳಿಂದ ರಕ್ಷಿಸು.  ಎಲ್ಲ ರೋಗರುಜಿನಗಳಿಂದ, ಪರೀಕ್ಷೆಯಿಂದ ಮತ್ತು ಕಷ್ಟಗಳಿಂದ ನನ್ನನ್ನು ಪಾರುಗಾಣಿಸು.
ಸತ್ಯವಾಗಿಯೂ ನೀನು ರಕ್ಷಕ, ಪೋಷಕ, ಕಾಪಾಡತಕ್ಕವ, ಸಂತೃಪ್ತಿದಾತ, ಅಷ್ಟೇ ಅಲ್ಲ. ಕರುಣಾಳುಗಳಲ್ಲಿ ಕರುಣಾಳು.

-`Abdu'l-Bahá
-----------------------

